ಬಡಗಿಜೇನು - 
ಹೈಮೆನಾಷ್ಟರ ಹಣದ ಜೈಲೊಕೋಪಿಡೀ ಕುಟುಂಬಕ್ಕೆ ಸೇರಿದ ಒಂಟಿ ಜೀವನ ನಡೆಸುವ ಜೇನ್ನೂಣ (ಕಾರ್ಪೆಂಟರ್ ಬೀ). ಇದರಲ್ಲಿ ಸುಮಾರು 350 ಪ್ರಭೇದಗಳಿದ್ದು ಇವು ಪ್ರಮುಖವಾಗಿ ಉಷ್ಣವಲಯದ ಅರಣ್ಯಗಳಲ್ಲಿ ಕಾಣದೊರೆಯುತ್ತದೆ. ಬಡಗಿ ಜೇನು ಮಧ್ಯಮಗಾತ್ರದಿಂದ ಹಿಡಿದು ದೊಡ್ಡ ಗಾತ್ರದ ವರೆಗಿನ ಕೀಟ. ಇದರ ದೇಹದ ಉದ್ದ 15-35 ಮೀಮೀ ಇರುವು ದುಂಟು. ಜೇನುನೊಣಗಳ ಪೈಕಿ ಇದೇ ಅತ್ಯಂತ ದೊಡ್ಡ ಗಾತ್ರದ್ದು. ದೇಹದ ಮೇಲೆಲ್ಲ ದಟ್ಟ ಕೂದಲುಗಳ ಹೊದಿಕೆಯಿದೆಯಾಗಿ ನೋಡಲು ದುಂಬಿಯಂತೆ ಕಾಣುತ್ತದೆ. ಮೈಬಣ್ಣ ಸಾಮಾನ್ಯವಾಗಿ ಕಪ್ಪು ಇಲ್ಲವೆ ದಟ್ಟ ನೀಲಿ. ಇದು ಮರಗಳನ್ನು ಕೊರೆದು ಗೂಡನ್ನು ರಚಿಸುವುದರಿಂದ, ಇದಕ್ಕೆ ಈ ಹೆಸರು ಬಂದಿದೆ. ತನ್ನ ಬಲವಾದ ದವಡೆಗಳ ಸಹಾಯದಿಂದ ಬೊಂಬು, ದೂಲ ಮತ್ತು ಗಳುಗಳಲ್ಲಿ 30ಸೆಂಮಿಗಿಂತ ಹೆಚ್ಚು ಉದ್ದದ ಸುರಂಗಗಳನ್ನು ಕೊರೆದು, ಅದರಲ್ಲಿ ಅನೇಕ ಕೋಣೆಗಳನ್ನು ರಚಿಸಿ ಅವುಗಳಲ್ಲಿ ಜೇನುತುಪ್ಪ ಮತ್ತು ಪುಷ್ಪಗಳ ಪರಾಗವನ್ನು ಶೇಖರಿಸಿಡುವುದಲ್ಲದೆ ತತ್ತಿಗಳನ್ನಿಟ್ಟು ಮರಿಗಳನ್ನು ಬೆಳೆಸುತ್ತದೆ. ತತ್ತಿಗಳನ್ನಿಟ್ಟ ಮೇಲೆ ಕೆಲವೊಮ್ಮೆ ತಾಯಿಹುಳು ಅವುಗಳ ಜೊತೆಯಲ್ಲೇ ಇರುವುದುಂಟು. ಆದರೆ ಇವುಗಳಲ್ಲಿ ಜೇನ್ನೋಣಗಳಲ್ಲಿರುವಂಥ ಸಮಾಜ ಜೀವನ ಕಾಣುವುದಿಲ್ಲ. ಬಡಗಿ ಜೇನಿನಿಂದ ಮರ ಮುಟ್ಟುಗಳಿಗೆ ಹೆಚ್ಚು ನಷ್ಟವಾಗುವುದಾದರೂ ಪರಾಗ ಸ್ಪರ್ಶ ಕ್ರಿಯೆಯ ಮೂಲಕ ಹಣ್ಣು ಹಂಪಲುಗಳು ಹೆಚ್ಚುವಂತೆ ಇದು ಮಾಡುವುದರಿಂದ ಮಾನವನಿಗೆ ಉಪಕಾರಿಯೆನಿಸಿದೆ. ಭಾರತದಲ್ಲಿ ಕಾಣದೊರೆಯುವ ಸುಮಾರು 18 ತೆರನ ಬಡಗಿ ಜೇನುಗಳಲ್ಲಿ ಮುಖ್ಯವಾದುವು ಇಂತಿವೆ : ಜೈಲೊಕೋಪ ಈಸ್ಟುವಾನ್ಸ್, ಜೈ ಇರಿಡಿಪೆನ್ನಿಸ್, ಜೈ ಲ್ಯಾಟಿಪಸ್, ಜೈ. ಡಿಸ್ಸಿಮಿಲಿಸ್ ಹಾಗೂ ಜೈ. ಕೊಲಾರಿಸ್. ಯೂರೊಪಿನಲ್ಲಿ ಜೈ. ವಯೊಲೇಸಿಯ ಎಂಬುದೂ ಅಮೆರಿಕದಲ್ಲಿ ಜೈ. ವರ್ಜಿನಿಕ ಹಾಗೂ ಜೈ. ಕ್ಯಾಲಿಫೋರ್ನಿಕ ಎಂಬವೂ ಬರ್ಮದಲ್ಲಿ ಜೈ. ರೂಫೆಸೆನ್ಸ್ ಎಂಬುದೂ ವಾಸಿಸುವುವು
(ಎಸ್.ವಿ.ಆರ್‍ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ